ಭಾರತೀಯ ಭಾಷೆಗಳು

ಭಾರತ ಬಹು ಭಾಷೆಗಳ ದೇಶ. ಇಲ್ಲಿ ಬಳಕೆಯಲ್ಲಿರುವ ಭಾಷೆಗಳ ಸಂಖ್ಯೆ ಖಚಿತವಾಗಿ ತಿಳಿದುಬಂದಿಲ್ಲ. ಭಾರತೀಯ ಭಾಷೆ ಮತ್ತು ಉಪಭಾಷೆಗಳ ಸರ್ವೇಕ್ಷಣಾ ಕಾರ್ಯವನ್ನು ಮೊತ್ತಮೊದಲು ಆರಂಭಿಸಿದ ಜಾರ್ಜ್ ಗ್ರಿಯರ್‍ಸನ್ ಅವರು ತಮ್ಮ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ಎಂಬ ಕೃತಿಯಲ್ಲಿ 1891ರ ಜನಗಣಿತಿ ಆಧಾರದ ಮೇಲೆ 179 ಭಾಷೆಗಳನ್ನೂ 544 ಉಪಭಾಷೆಗಳನ್ನೂ ಪಟ್ಟಿಮಾಡಿದ್ದಾರೆ. 1921ರ ಜನಗಣಿತಿ ವರದಿಯಲ್ಲಿ 188 ಭಾಷೆಗಳೂ 49 ಉಪಭಾಷೆಗಳೂ ಉಕ್ತವಾಗಿವೆ. 1951ರ ಗಣಿತಿ ಒಟ್ಟು 782 ಭಾಷೆ ಮತ್ತು ಉಪಭಾಷಿಗಳೂ ಉಕ್ತವಾಗಿವೆ. 1951ರ ಗಣಿತಿ ಒಟ್ಟು 782 ಭಾಷೆ ಮತ್ತು ಉಪಭಾಷೆಗಳನ್ನು ಹೇಳುತ್ತದೆ. 1971ರ ಜನಗಣಿತಿಯ ಪ್ರಕಾರ ಭಾರದಲ್ಲಿ ಒಂದು ಸಾವಿರದ ಐನೂರಕ್ಕೂ ಹೆಚ್ಚು ಭಾಷೆ ಮತ್ತು ಉಪಭಾಷೆಗಳು ಬಳಕೆಯಲ್ಲಿವೆ ಎಂಬುದಾಗಿ ತಿಳಿದುಬಂದಿದೆ. ಭಾಷೆಗಳ ಈ ಸಂಖ್ಯೆ ಕರಾರುವಾಕ್ಕಾಗಿಲ್ಲ. ಏಕೆಂದರೆ ಸರ್ವೇಕ್ಷಣೆ ನಡೆಸಿದ ತಜ್ಞರು ಉಪಭಾಷೆಗಳನ್ನೂ ಭಾಷೆಗಳೆಂದೇ ತಿಳಿದು ಅವನ್ನು ಭಾಷಾ ಗುಂಪಿನಲ್ಲಿ ಸೇರಿಸಿದ್ದಾರೆ. ಅಲ್ಲದೆ ಒಂದೇ ಭಾಷೆಗೆ ಇರುವ ಬೇರೆ ಬೇರೆ ಹೆಸರುಗಳನ್ನು ತಿಳಿಯದೆ ಅವನ್ನೆಲ್ಲ ಬೇರೆ ಬೇರೆ ಭಾಷೆಗಳೆಂದೇ ವರ್ಗೀಕರಿಸಿದ್ದಾರೆ. ಎಷ್ಟೋ ಭಾಷೆ ಮತ್ತು ಉಪಭಾಷೆಗಳನ್ನು ಆಡುವವರ ಸಂಖ್ಯೆ ಕೇವಲ ಒಂದು ಅಥವಾ ಎರಡು ಎಂಬುದಾಗಿ ತಿಳಿಸಿರುವುದುಂಟು. ಅನೇಕ ಗುಡ್ಡಗಾಡಿನ ಜನರ ಭಾಷೆಗಳನ್ನು ಇನ್ನೂ ಗುರುತಿಸಬೇಕಾಗಿದೆ.

	ಆಧುನಿಕ ಭಾಷಾವಿಜ್ಞಾನಿಗಳು ಭಾರತೀಯ ಭಾಷೆಗಳನ್ನು ಇಂಡೋಆರ್ಯನ್, ದ್ರಾವಿಡ, ಆಸ್ಟ್ರಿಕ್, ಟಿಬೆಟೂ ಬರ್ಮನ್ ಎಂಬ ಭಾಷಾಪರಿವಾರಗಳಲ್ಲಿ ವರ್ಗೀಕರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಈ ಯಾವ ಭಾಷಾಪರಿವಾರಕ್ಕೂ ಸೇರಿಸಲಾಗದ ಭಾಷೆಗಳನ್ನು ಅವರ್ಗೀಕೃತ ಭಾಷಾಪರಿವಾರವೆಂದು ಪ್ರತ್ಯೇಕವಾಗಿ ವಿಂಗಡಿಸಿದ್ದಾರೆ.

	ಇಂಡೋ ಆರ್ಯನ್ ಭಾಷಾಪರಿವಾರ: ಈ ಪರಿವಾರಕ್ಕೆ ಸೇರಿದ ಭಾಷೆಗಳನ್ನು ಐತಿಹಾಸಿಕವಾಗಿ ಪ್ರಾಚೀನ ಇಂಡೋ ಆರ್ಯನ್, ಮಧ್ಯಕಾಲೀನ ಇಂಡೋ ಆರ್ಯನ್ ಮತ್ತು ಆಧುನಿಕ ಇಂಡೋ ಆರ್ಯನ್ ಎಂಬುದಾಗಿ ವರ್ಗೀಕರಿಸಲಾಗಿದೆ. ಪ್ರಾಚೀನ ಇಂಡೋಆರ್ಯನ್ ಭಾಷೆಗಳಲ್ಲಿ ವೇದಗಳ ಸಂಸ್ಕ್ರತವವೇ (ಕ್ರಿ.ಪೂ. ಸು. 2000) ಬಲುಮುಖ್ಯ ಭಾಷೆ. ಈ ಭಾಷೆಯನ್ನೇ ಪ್ರಾಚೀನ ಭಾರತದ ಸಾಮಾಜಿಕ, ಸಾಂಸ್ಕøತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಪ್ರಾಚೀನ ಭಾರತದ ಸಕಲಶಾಸ್ತ್ರ ಹಾಗೂ ಜ್ಞಾನಭಂಡಾರವನ್ನು ಇದು ಪ್ರತಿಬಿಂಬಿಸುತ್ತದೆ. ವೇದಗಳ ಸಂಸ್ಕøತದಿಂದ ಕಾಲಕ್ರಮೇಣ ಲೌಕಿಕ ಸಂಸ್ಕ್ರತ ವಿಕಾಸಗೊಂಡಿತು. ಮಧ್ಯಕಾಲೀನ ಆರ್ಯನ್ ಭಾಷೆಗಳಲ್ಲಿ ಪಾಲಿ, ಪ್ರಾಕೃತ ಮತ್ತು ಅಪಭ್ರಂಶ ಭಾಷೆಗಳು ಮುಖ್ಯವಾಗಿವೆ. ಪಾಲಿ ಭಾಷೆಯನ್ನು ಬೌದ್ಧಮತ ಸ್ಥಾಪಕರು ತಮ್ಮ ಮತ ಪ್ರಚಾರಕ್ಕೆ ಬಳಸಿಕೊಂಡರೆ. ಪ್ರಾಕೃತ ಭಾಷೆಯನ್ನು ಜೈನರು ತಮ್ಮ ಮತ ಪ್ರಚಾರಕ್ಕೆ ಬಳಸಿಕೊಂಡರು ಅಪಭ್ರಂಶ ಮುಖ್ಯವಾಗಿ ಆಡುಭಾಷೆಯಾಗಿದ್ದಿತು. ಆಧುನಿಕ ಇಂಡೋಆರ್ಯನ್ ಭಾಷೆಗಳೇ ಈಗ ಬಳಕೆಯಲ್ಲಿರುವ ಭಾಷೆಗಳು. ಇವೆಲ್ಲವೂ ಬೇರೆ ಬೇರೆ ಪ್ರಾಕೃತ ಅಪಭ್ರಂಶ ಭಾಷೆಗಳಿಂದ ವಿಕಾಸಗೊಂಡು ತಮ್ಮವೇ ಆದ ರೀತಿಯಲ್ಲಿ ಬೆಳೆದು ಬಂದ ಭಾಷೆಗಳು. ಇವುಗಳ ಇತಿಹಾಸ ಕ್ರಿ.ಶ. 10ನೆಯ ಶತಮಾನದಿಂದ ಆರಂಭವಾಗುತ್ತದೆ. ಸಿಂಧಿ, ಪಂಜಾಬಿ, ಗುಜರಾತಿ ಹಿಂದಿ, ರಾಜಸ್ಥಾನಿ, ಬಿಹಾರಿ, ಬಂಗಾಳಿ, ಒರಿಯ, ಮರಾಠಿ, ಪಹಾಡಿ ಮುಂತಾದವು ಈ ವರ್ಗಕ್ಕೆ ಸೇರಿವೆ.

	ದ್ರಾವಿಡ ಭಾಷಾಪರಿವಾರ: ಭೌಗೋಳಿಕವಾಗಿ ಎಲ್ಲ ದ್ರಾವಿಡ ಭಾಷೆಗಳನ್ನೂ ದಕ್ಷಿಣ, ಮಧ್ಯ ಹಗೂ ಉತ್ತರ ದ್ರಾವಿಡ ಭಾಷಾವರ್ಗಗಳೆಂದು ವರ್ಗೀಕರಿಸಲಾಗಿದೆ. ತಮಿಳು, ಮಲಯಾಳಮ್, ಕೋತ, ತೋಡ, ಇರುಳ, ಯರವ, ಕನ್ನಡ, ಕೊಡಗು, ಬಡಗ, ಹವ್ಯಕ, ಸೋಲಿಗ, ಕುರುಬ, ತುಳು, ಕೊರವ, ಬೆಲ್ದರಿ, ತೆಲುಗು, ಸವಾರ ಮುಂತಾದ ಭಾಷೆ ಮತ್ತು ಉಪಭಾಷೆಗಳು ದಕ್ಷಿಣ ದ್ರಾವಿಡ ಭಾಷಾವರ್ಗಕ್ಕೆ ಸೇರಿವೆ. ಮಧ್ಯ ದ್ರಾವಿಡ ಭಾಷಾ ವರ್ಗದಲ್ಲಿ ಕೊಲಾಮಿ, ನಾಯ್ಕಿ, ಪರ್ಜಿ, ಗದಬ, ಗೋಂಡಿ, ಕೊಂಡ, ಕೋಯ, ಪೆಂಗು, ಕುಯಿ, ಕುವಿ ಮುಂತಾದ ಭಾಷೆಗಳು ಸೇರಿವೆ. ಉತ್ತರ ದ್ರಾವಿಡ ಭಾಷಾವರ್ಗಕ್ಕೆ ಕುರುಬ್, ಮಲ್ತೊ, ಬ್ರಾಹ್ವೀ, ಧಾಂಗರ್ ಎಂಬ ಭಾಷೆಗಳು ಸೇರ್ಪಡೆಯಾಗಿವೆ. ಭಾರದಲ್ಲಿ ಸುಮಾರು ಹದಿನಾಲ್ಕು ಕೋಟಿಗೂ ಹೆಚ್ಚು ಜನ ದ್ರಾವಿಡ ಭಾಷಾಪರಿವಾರಕ್ಕೆ ಸೇರಿದ ಬೇರೆ ಬೇರೆ ಭಾಷೆಗಳನ್ನಾಡುತ್ತಿದ್ದಾರೆ.

	ಆಸ್ಟ್ರಿಕ್ ಭಾಷಾ ಪರಿವಾರ: ಈ ಪರಿವಾರಕ್ಕೆ ಸೇರಿದ ಭಾಷೆಗಳನ್ನು ಮುಂಡಾ, ಖಾಸಿ, ಹೋ ಮತ್ತು ನಿಕೋಬಾರಿ ಎಂಬ ಭಾಷಾವರ್ಗಗಳಲ್ಲಿ ವರ್ಗೀಕರಿಸಿಕೊಳ್ಳಲಾಗಿದೆ. ಮುಂಡಾವರ್ಗದಲ್ಲಿ ಕರ್ಮಲಿ, ಮಹಿಲಿ, ಖರಿಯ, ಸಂತಾಲಿ, ಖೇರ್ವಾರಿ, ವಾಖಡಿಯ ಮುಖ್ಯ ಭಾಷೆಗಳು. ಖಾಸಿ, ನನ್‍ತುಂಗ್ ಮುಂತಾದವು ಖಾಸಿ ಭಾಷಾವರ್ಗಕ್ಕೂ ಹೋ, ಧಾರ್, ಕೊಡ ಎಂಬವು ಹೋ ಭಾಷಾವರ್ಗಕ್ಕೆ ಸೇರಿವೆ. ನಿಕೋಬಾರಿ ಭಾಷಾವರ್ಗದ ಮುಖ್ಯಭಾಷೆ ನಿಕೋಬಾರಿ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಅಸ್ಸಾಮ್, ಮಧ್ಯಪ್ರದೇಶ, ತ್ರಿಪುರ, ನಾಗಾಲ್ಯಾಂಡ್, ಅಂಡಮಾನ್ ಮತ್ತು ನಿಕೋಬಾರ್ ಮುಂತಾದೆಡೆಗಳಲ್ಲಿ ಈ ಪರಿವಾರದ ಭಾಷೆಗಳನ್ನಾಡುವವರುಂಟು.

	ಟಿಬೆಟೊ-ಬರ್ಮನ್ ಭಾಷಾಪರಿವಾರ: ಇದನ್ನು ಏಕಾಕ್ಷರ ಪರಿವಾರವೆಂದೂ ಕರೆಯವರು. ಈ ಪರಿವಾರಕ್ಕೆ ಸೇರಿದ ಭಾಷೆಗಳನ್ನು ಹಿಮಾಲಯನ್ ಭಾಷಾವರ್ಗ (ಉದಾ: ಲೆಪ್ಚ, ಲಹುಲಿ); ಅಸ್ಸಾಮಿ-ಬರ್ಮಿ ಭಾಷಾವರ್ಗ (ಅಕ, ದಫ್ಲ, ಮಿರಿ ಇ.); ಕುಕಿಚಿನ್ ಭಾಷಾವರ್ಗ (ಖೊಂಗ್‍ಜೈ. ಲುಶಾಯಿ. ಮಣಿಪುರಿ ಇ.); ನಾಗಾ ಭಾಷಾವರ್ಗ (ಅಂಗಾಮಿ. ಆಪೊ, ಕೊನ್ಯಕ್ ಇ.) ಭಾಟಿಯ ಭಟಿಯ, ಭೂತಾನಿ, ಲಡಾಕಿ ಇ.); ನಿಘ ಭಾಷಾ ವರ್ಗ (ಮಿನ್ಸೊಂಗ್, ಸಿಮೊಂಗ್ ಇ.) ಮತ್ತು ಬೋಡೋ ಭಾಷಾವರ್ಗ (ಬೋಡೋ, ತ್ರಿಪುರಿ, ಕೊಂಚ್ ಇ.) ಎಂಬ ಭಾಷಾವರ್ಗಗಳಲ್ಲಿ ವರ್ಗೀಕರಿಸಿಕೊಳ್ಳಲಾಗಿದೆ. ಹಿಮಾಚಲಪ್ರದೇಶ, ಸಿಕ್ಕಿಮ್, ಮಣಿಪುರ, ಜಮ್ಮುಕಾಶ್ಮೀರ, ಅಸ್ಸಾಮ್, ತ್ರಿಪುರ, ನಾಗಾಲ್ಯಾಂಡ್ ಮತ್ತಿತರ ಕಡೆಗಳಲ್ಲಿ ಈ ಪರಿವಾರಕ್ಕೆ ಸೇರಿದ ಭಾಷೆಗಳನ್ನಾಡುವ ಜನರಿದ್ದಾರೆ.

	ಅವರ್ಗೀಕೃತ ಭಾಷಾಪರಿವಾರ: ಸುಮಾರು ಆರು ನೂರಕ್ಕೂ ಹೆಚ್ಚು ಭಾಷೆ ಮತ್ತು ಉಪಭಾಷೆಗಳು ಈ ಪರಿವಾರಕ್ಕೆ ಸೇರಿವೆಯೆಂದು ಊಹಿಸಲಾಗಿದೆ. ಆದಿಭಾಷೆ, ಆಹಿರಿ, ಕಲ್‍ಬೋಲಿ, ಮಿಜಯಿ, ಬಕೆರ್ವಾಲಿ, ದೇಸ್ವಾಲಿ, ಬಂಗ್ರೆ, ಸುಲುಂಗ್, ಸರೋದಿ, ಲಾಡ, ತಿರುಗುಲಿ, ಲಂಬಾಣಿ, ಬಂಜಾರಿ, ಊಚೈ, ಬೈಸಿಯ, ಗಟ್ರೋ, ಗುಲ್ಗುಲಿಯ, ಝರ, ಸುದಿಯ, ತೇವಾರಿ, ಕಚ್‍ಬಂದಿ, ಗ್ವೋಲಿ, ಚಂದರಿ, ಬಸೌಲಿ, ಮಸ್ತಿನ್, ಪೊಂದರ, ವಡ್ಡ, ಬಂದಾಲ, ಎತಿ, ಗೊದಲಿ, ಬುರುಷಾಸ್ಕಿ, ಕರೇಣಿ, ಎನ್, ಅಂಡಮಾನಿ, ಮಾನ್ ಮುಂತಾದ ಭಾಷೆಗಳನ್ನು ಅವರ್ಗೀಕೃತ ಭಾಷೆಗಳನ್ನಾಗಿ ಪರಿಗಣಿಸಲಾಗಿದೆ.

	ಭಾರತದ ವಿವಿಧ ಭಾಷಾಪರಿವಾರಗಳಿಗೆ ಸೇರಿದ ಅನೇಕ ಭಾಷೆ ಮತ್ತು ಉಪಭಾಷೆಗಳ ಜೊತೆಗೆ ಹಲವಾರು ವಿದೇಶಿ ಭಾಷೆಗಳೂ ಭಾರದಲ್ಲಿ ಬಳಕೆಯಲ್ಲಿವೆ. ಪಶ್ತೊ, ಅರಾಬಿಕ್, ಬಲೂಚಿ, ಚೀನಿ, ಡೇನಿಷ್, ಡಚ್, ಫ್ರೆಂಚ್, ಜರ್ಮನ್, ರಷ್ಯನ್, ಗ್ರೀಕ್; ಇರಾನಿ, ಇಂಗ್ಲಿಷ್, ಥಾಯ್, ಜಪಾನಿ, ಪೋರ್ಜುಗೀಸ್ ಮುಂತಾದ ಭಾಷೆಗಳನ್ನಾಡುವ ಜನರು ಭಾರತದ ಮುಖ್ಯ ನಗರಗಳಲ್ಲಿ ನೆಲಸಿದ್ದಾರೆ. ವ್ಯಾಪಾರ, ವಾಣಿಜ್ಯ, ಕೈಗಾರಿಕೆ, ಅಧ್ಯಯನ ಮುಂತಾದ ಕಾರಣಗಳಿಗೇ ಅಲ್ಲದೇ ವಿದೇಶಿಯರಿದ್ದಾರೆ. ಅವರ ಸಂಖ್ಯೆ ಎಪ್ಪತ್ತೈದು ಸಾವಿರಕ್ಕೂ ಹೆಚ್ಚು ಎಂಬುದಾಗಿ ತಿಳಿದುಬಂದಿದೆ (1971).

	ಭಾರತದ ಸಾವಿರಾರು ಭಾಷೆ ಉಪಭಾಷೆಗಳ ಪೈಕಿ ಲಿಪಿಯನ್ನು ಹೊಂದಿರುವ ಭಾಷೆಗಳ ಸಂಖ್ಯೆ ಬಲು ಕಡಿಮೆ. ಲಿಪಿಸೌಲಭ್ಯ ಪಡೆಯದಿರುವ ಭಾಷೆಗಳು ಕೇವಲ ಆಡುನುಡಿಗಳಾಗಿವೆ. ಆದ್ದರಿಂದ ಭಾರತದ ಸಂವಿಧಾನ ಮಾನ್ಯ ಮಾಡಿರುವ ಭಾಷೆಗಳು ಇವು: ಅಸ್ಸಾಮಿ, ಉರ್ದು, ಒರಿಯ, ಕನ್ನಡ, ಕಾಶ್ಮೀರಿ, ಗುಜರಾತಿ, ತಮಿಳು, ತೆಲುಗು, ಪಂಜಾಬಿ, ಬಂಗಾಳಿ, ಮರಾಠಿ, ಮಲಯಾಳಮ್, ಸಂಸ್ಕøತ, ಸಿಂಧಿ ಮತ್ತು ಹಿಂದಿ. ಸೃಜನಶೀಲ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಕೇಂದ್ರಸಾಹಿತ್ಯ ಅಕಾಡೆಮಿ ಮೇಲೆ ಹೇಳಿರುವ ಹದಿನೈದು ಭಾಷೆಗಳ ಜೊತೆಗೆ ಇಂಗ್ಲಿಷ್, ಕೊಂಕಣಿ, ಡೋಗ್ರಿ, ನೇಪಾಳಿ, ಮಣಿಪುರಿ, ಮೈಥಿಲಿ ಮತ್ತು ರಾಜಸ್ಥಾನಿ ಭಾಷೆಗಳನ್ನೂ ಮಾನ್ಯ ಮಾಡಿದೆ. ಸಾಮಾಜಿಕ, ಸಾಂಸ್ಕ್ರತಿಕ, ಸಾಹಿತ್ಯಿಕ, ರಾಜಕೀಯ ಮುಂತಾದ ಎಲ್ಲ ಚಟುವಟಿಕೆಗಳಿಗೂ ಭಾರತದ ರಾಜ್ಯಾಂಗದಲ್ಲಿ ಉಲ್ಲೇಖಿತವಾಗಿರುವ ಭಾಷೆಗಳನ್ನೇ ಹೆಚ್ಚು ಬಳಸಲಾಗುತ್ತಿದೆ. 			
	(ಎಂ.ಸಿ.; ಕೆ.ಕೆ.; ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ